ರಾಮನ್, ಸಿ ವಿ
1888-1970. ದ್ಯುತಿಭೌತವಿಜ್ಞಾನದಲ್ಲಿನ ವಿದ್ಯಮಾನವೊಂದನ್ನು ಮೊತ್ತಮೊದಲಿಗೆ ವೈಜ್ಞಾನಿಕವಾಗಿ ಅರ್ಥವಿಸಿ ರಾಮನ್ ಪರಿಣಾಮ ಎಂಬ ಹೆಸರಿನಿಂದ ಪ್ರಪಂಚಕ್ಕೆ ಪ್ರಕಟಿಸಿದ.  ಏಷ್ಯದಲ್ಲೇ ಮೊತ್ತಮೊದಲಬಾರಿಗೆ ನೊಬೆಲ್ ಪಾರಿತೋಷಿಕ ಪಡೆದ ಭಾರತೀಯ ಭೌತವಿಜ್ಞಾನಿ.  ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್.  ಇವರು ಜನಿಸಿದ್ದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಾನೈಕ್ಯಾವಲ್ ಎಂಬ ಗ್ರಾಮದಲ್ಲಿ (7-11-1888).  ಇವರ ಎಳೆತನದ ವಿದ್ಯಾಭ್ಯಾಸ ವಿಶಾಖಪಟ್ಟಣದಲ್ಲಿ ಆಯಿತು.  ಇವರು 1963ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು.  1904ರಲ್ಲಿ ಬಿ.ಎ. ಪದವಿ ಗಳಿಸಿದರು.  1907ರಲ್ಲಿ ಭೌತವಿಜ್ಞಾನದ ಎಂ.ಎ. ಪದವಿಯನ್ನು ಅದೇ ಕಾಲೇಜಿನಿಂದ ಪಡೆದು ಅದೇ ವರ್ಷ ಅಖಿಲ ಭಾರತ ಸ್ಪರ್ಧಾಪರೀಕ್ಷೆಗೆ (ಎಫ್.ಸಿ.ಎಸ್) ಕುಳಿತು ಉತ್ತೀರ್ಣರಾಗಿ, ಭಾರತ ಸರ್ಕಾರದ ವಿತ್ತ ವಿಭಾಗದಲ್ಲಿ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡರು.  ಇದೇ ವರ್ಷ ಲೋಕಸುಂದರಿ ಎಂಬುವರೊಡನೆ ಇವರ ವಿವಾಹವಾಯಿತು.  ಇವರನ್ನು ಸರ್ಕಾರಿ ಕೆಲಸದ ನಿಮಿತ್ತ ಬರ್ಮದ ರಂಗೂನಿಗೆ ಕಳುಹಿಸಿಕೊಡಲಾಯಿತು.  ನಾಗಪುರದಲ್ಲೂ ಕೆಲಕಾಲ ಸೇವೆ ಸಲ್ಲಿಸಿದರು.  ಆದರೆ ಇವರ ಒಲವೆಲ್ಲ ವಿಜ್ಞಾನದ ಕಡೆಗೇ ಇದ್ದುದರಿಂದ ಕಲ್ಕತ್ತದಲ್ಲಿನ ದಿ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್ ಎಂಬ ಖಾಸಗಿ ವಿಜ್ಞಾನ ಸಂಶೋಧನೆ ಮಂದಿರದಲ್ಲಿ ಸಂಶೋಧನೆಯಲ್ಲಿ ತೊಡಗಿದರು.  ಇಲ್ಲಿದ್ದಾಗ ಮೇಲ್ಮೈಕರ್ಷಣ (ಸರ್ಫೇಸ್ ಟೆನ್ಷನ್) ಮತ್ತು ಬೆಳಕಿನ ಸಂಚರಣೆಯನ್ನು (ಪ್ರಾಪಗೇಷನ್ ಆಫ್ ಲೈಟ್) ಕುರಿತಂತೆ ಕೆಲಸ ಮಾಡಿದರು.  ಉದ್ಯೋಗ ನಿಮಿತ್ತ ಕಲ್ಕತ್ತದಿಂದ ಹೊರಗಿನ ಊರುಗಳಿಗೆ ಹೋಗಿದ್ದ ರಾಮನ್ ಅವರು 1911ರಲ್ಲಿ ಪುನಃ ಕಲ್ಕತ್ತೆಗೆ ಮರಳಿದರು.  ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿ ಅಶುತೋಷ ಮುಖರ್ಜಿಯವರ ಆಮಂತ್ರಣದ ಮೇರೆಗೆ 1917ರಲ್ಲಿ ಇವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಆ ವಿಶ್ವವಿದ್ಯಾಲಯದ ಪಲಿತ್ ಭೌತವಿಜ್ಞಾನ ಪೀಠದ ಪ್ರಾಧ್ಯಾಪಕರಾಗಿ ಸೇರಿದರು.  ಇದಕ್ಕೆ ಇವರ ಧರ್ಮಪತ್ನಿ ಲೋಕಸುಂದರಿ ರಾಮನ್ ಅವರ ಪ್ರೋತ್ಸಾಹವೂ ದೊರಕಿತ್ತು.  1921ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯ ಇವರಿಗೆ ಡಾಕ್ಟೊರೇಟ್ ಪದವಿ ನೀಡಿ ಗೌರವಿಸಿತು.  

ಸದಾ ಕುತೂಹಲಿ, ಪ್ರಯೋಗಪಟು ಮತ್ತು ಚಿಂತನಶೀಲರಾಗಿದ್ದ ರಾಮನ್ 1917ರಿಂದ ಮುಂದೆ ಮೂಲಭೂತ ಸಂಶೋಧನೆಗಳನ್ನು ಮಾಡಲು ಉದ್ಯುಕ್ತರಾದರು.  ಬೆಳಕಿನ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುವುದು ಇವರ ಆಗಿನ ಆಸಕ್ತ ಕ್ಷೇತ್ರ.  ಇಲ್ಲಿ ದುಡಿದವರ ಪರಮಸಿದ್ಧಿಯೇ ರಾಮನ್ ಪರಿಣಾಮದ (ರಾಮನ್ ಎಫೆಕ್ಟ್) ಆವಿಷ್ಕಾರ.  ಯಾವುದೇ ಒಂದು ಬಣ್ಣದ ಉದಾಹರಣೆಗೆ ಕೆಂಪು, ನೀಲಿ, ಹಳದಿ ಇತ್ಯಾದಿ ಬೆಳಕಿನ ಕಿರಣದಂಡವನ್ನು ಅಶ್ರಕದ ಮೂಲಕ ಹಾಯಿಸಿ ಬಿಳಿತೆರೆಯ ಮೇಲೆ ಬೀಳಿಸಿದರೆ ಅದರ ರೋಹಿತ ದೊರೆಯುವುದು. ಇದರಲ್ಲಿ ಕೆಲವು ಉಜ್ವಲ ರೇಖೆಗಳು ಎದ್ದುಕಾಣುವುವು.  ಇವೆಲ್ಲವೂ ಮೂಲ ಬೆಳಕಿನ ಬಣ್ಣದವೇ ಆಗಿ ತೋರಿದರೂ ಛಾಯೆಗಳಲ್ಲಿ ಸಂಯುಕ್ತವಾಗಿರುತ್ತದೆ ಮತ್ತು ಅಶ್ರಕ ಅದನ್ನು ವಿಭಜಿಸಿದೆ ಎಂದು ತಿಳಿಯುವುದು.  ಆ ಒಂದೊಂದು ಘಟಕದ (ಅಂದರೆ ಛಾಯೆಯ) ಅಲೆಯುದ್ಧ ಬೇರೆ ಬೇರೆ ಇರುವುದರಿಂದ ಅದು ರೋಹಿತದಲ್ಲಿ ತನಗೇ ವಿಶಿಷ್ಟವಾದ ಸ್ಥಾನವನ್ನು ಪಡೆಯುತ್ತದೆ.  ಈಗ ಅದೇ ಬೆಳಕನ್ನು ಮೊದಲು ಪಾರದರ್ಶಕ ಪದಾರ್ಥದ ಮೂಲಕವೂ ಮತ್ತೆ ಅಶ್ರಕದ ಮೂಲಕವೂ ಹರಿಸಿ ಆದರ ರೋಹಿತವನ್ನು ಪಡೆದರೆ ಇದರಲ್ಲಿ ಮೊದಲಿದ್ದ ಗೆರೆಗಳ ಜೊತೆಗೆ ಕೆಲವು ಹೊಸ ಗೆರೆಗಳು ಕಂಡುಬರುವುವು.  ಆದ್ದರಿಂದ ಮೂಲ ಬೆಳಕಿನಲ್ಲಿ ಇದ್ದ ವಿವಿಧ ಅಲೆಯುದ್ಧದ ರಶ್ಮಿಗಳ ಜೊತೆಗೆ ಹೊಸ ಅಲೆಯುದ್ಧವೂ ಸೇರಿಕೊಂಡಿವೆ ಎಂದು ತೀರ್ಮಾನಿಸಬೇಕಾಗುವುದು.  ಬೆಳಕಿನ ಹಾದಿಯಲ್ಲಿ ಪಾರದರ್ಶಕಪದಾರ್ಥ ಅಡ್ಡಬರುವುದರಿಂದ ಈ ಪರಿಣಾಮ ಕಂಡುಬರುತ್ತದೆ.  ಇದೇ ರಾಮನ್ ಪರಿಣಾಮ.  ಇದರ ಅಧ್ಯಯನದಿಂದ ಪಾರದರ್ಶಕಪದಾರ್ಥದ ಅಣುರಚನೆಯ ಬಗ್ಗೆ ಮಾಹಿತಿ ಪಡೆಯಬಹುದು.  ಭೌತವಿಜ್ಞಾನ ಸಂಶೋಧನೆಗಳಲ್ಲಿ ರಾಮನ್ ಪರಿಣಾಮಕ್ಕೆ ಮಹತ್ತ್ವದ ಸ್ಥಾನವಿದೆ.  ಇದರ ಆವಿಷ್ಕಾರ ಕಲ್ಕತ್ತದಲ್ಲಾದರೂ ರಾಮನ್ ಇದನ್ನು ಪ್ರಕಟಿಸಿದ್ದು ಬೆಂಗಳೂರಿನಲ್ಲಿ (28-2-1928).  ಈ ಆವಿಷ್ಕಾರದ ಹಿರಿಮೆಯನ್ನು ಗುರುತಿಸಿ ಸ್ವೀಡನ್ನಿನ ನೊಬೆಲ್ ಪ್ರತಿಷ್ಠಾನ ಇವರಿಗೆ 1930ರ ಭೌತವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕವನ್ನು ನೀಡಿ ಗೌರವಿಸಿತು.  ಆ ಮೊದಲೇ 1924ರಲ್ಲಿ ಇವರಿಗೆ ಎಫ್.ಆರ್.ಎಸ್. ಪ್ರಶಸ್ತಿ ಬಂದಿತ್ತು.  ಇವರ ಅಧ್ಯಯನ ಮತ್ತು ಸಂಶೋಧನೆಗಳ ಮಹತ್ತ್ವವನ್ನು ಮನಗಂಡು ಇವರನ್ನು ಪ್ರಪಂಚದ ಇನ್ನಿತರ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದವು.  1928ರಲ್ಲಿ ಸೈನ್ಸ್ ಸೊಸೈಟಿ ಆಫ್ ರೋಮ್ ಎಂಬ ಸಂಸ್ಥೆ ಮ್ಯಾಬ್ಯುಟಿ ಪದಕ ನೀಡಿ ಗೌರವಿಸಿತು. ಬ್ರಿಟಿಷ್ ಸರ್ಕಾರ ಇವರಿಗೆ ಸರ್‍ಪದವಿಯನ್ನಿತ್ತು 1929ರಲ್ಲಿ ಪುರಸ್ಕರಿಸಿತು.  1930ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿ ಹ್ಯೂಗ್ಸ್ ಪದಕ ನೀಡಿ ಗೌರವಿಸಿತ್ತು.  1941ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಫ್ರಾಂಕ್ಲಿನ್ ಪದಕ ಇವರಿಗೆ ಸಂದಿತು.  ಭಾರತ ಸರ್ಕಾರ ಇವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿತು (1954).

1933ರಲ್ಲಿ ರಾಮನ್ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸಿನ ನಿರ್ದೇಕತ್ವವನ್ನು ವಹಿಸಿಕೊಂಡರು. ಮರುವರ್ಷ ಇಂಡಿಯನ್ ಅಕೆಡಮಿ ಆಫ್ ಸೈನ್ಸಸ್‍ನ್ನು ಖಾಸಗಿಯಾಗಿ ತಮ್ಮ ಸಂಚಾಲಕತ್ವದಲ್ಲಿ ಸ್ಥಾಪಿಸಿದರು. ಇದರ ಉದ್ದೇಶಗಳಿಷ್ಟು : ಪ್ರಥಮದರ್ಜೆಯ ಸಂಶೋಧನೆ ಪ್ರಬಂಧಗಳನ್ನು ಪ್ರಕಟಿಸುವುದು. ವಿಜ್ಞಾನಸಂಬಂಧ ಸಮಸ್ಯೆಗಳ ಚರ್ಚೆಗೆ ಹೊಸ ವೇದಿಕೆ ಒದಗಿಸುವುದು. ಭಾರತದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನೆಗಳನ್ನು ಸಂಘಟಿಸುವುದು. ಈ ಉದ್ದೇಶ ಸಿದ್ಧಿಗಾಗಿ ಸಂಶೋಧನ ಮಾಸಿಕವೊಂದನ್ನು (ಪ್ರೊಸೀಡಿಂಗ್ಸ್ ಆಫ್ ದಿ ಇಂಡಿಯನ್ ಅಕೆಡೆಮಿ) ಸಹ ರಾಮನ್ ಪ್ರಾರಂಭಿಸಿದರು. ತಮ್ಮ ನೆಚ್ಚಿನ ವಿಜ್ಞಾನ ಮಂದಿರವನ್ನು ಇವರು ಬೆಂಗಳೂರಿನ ಹೆಬ್ಬಾಳ ಎಂಬಲ್ಲಿ ಕಟ್ಟಿಸಿದರು (1947). 1939ರಲ್ಲಿ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸಿನ ನಿರ್ದೇಶಕತ್ವವನ್ನು ಬಿಟ್ಟು ಕೊಟ್ಟು ಕೇವಲ ಭೌತವಿಜ್ಞಾನ ವಿಭಾಗದ ಮುಖ್ಯರಾಗಿ ಉಳಿದರು. 1918ರಲ್ಲಿ ಈ ಹೊಣೆಗಾರಿಕೆಯನ್ನೂ ಕಳಚಿಕೊಂಡು ಸ್ವಂತ ಮಂದಿರದ ಪೂರ್ಣಕಾಲದ ಸಂಶೋಧಕ ಮತ್ತು ನೇತಾರರಾದರು. ರಾಮನ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಎಂದೇ ಪ್ರಸಿದ್ಧವಾಗಿರುವ ಈ ಮಂದಿರದ ಜೀವನಾಡಿ ಏನಿರಬೇಕು ಎಂಬುದನ್ನು ಸ್ವತಃ ಅವರೇ ಹೀಗೆಂದು ಬರೆದಿದ್ದಾರೆ. ಅದರ ಕನ್ನಡ ಭಾವಾನುವಾದ ಹೀಗಿದೆ : ``ನಮ್ಮ ಪ್ರಾಚೀನ ರಾಷ್ಟ್ರಕ್ಕೆ ತಕ್ಕುದಾದಂಥ ವಿಜ್ಞಾನ ಸಂಶೋಧನೆ ಕೇಂದ್ರವನ್ನು ಅಸ್ತಿತ್ವಕ್ಕೆ ತರಬೇಕೆಂಬುದು ನನ್ನ ತೀವ್ರ ಅಭಿಲಾಷೆ. ಈ ಕೇಂದ್ರದಲ್ಲಿ ನಮ್ಮ ದೇಶದ ತೀಕ್ಷ್ಣಮತಿಗಳು ವಿಶ್ವರಹಸ್ಯಗಳನ್ನು ಶೋಧಿಸಬೇಕು; ಮತ್ತು ಹಾಗೆ ಮಾಡುವುದರ ಮೂಲಕ ವಿಶ್ವಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಅತೀತ ಶಕ್ತಿಯನ್ನು ಗ್ರಹಿಸಲು ನಿಮಗೆ ನೆರವಾಗಬೇಕು. ಆತನ ದಿವ್ಯಕೃಪೆಯಿಂದ ನಮ್ಮ ದೇಶಪ್ರೇಮಿಗಳೆಲ್ಲರೂ ಈ ಕಾರಣವನ್ನು ಪೋಷಿಸುವ ವಿಧಾನವನ್ನು ಕಂಡಾಗ ಮಾತ್ರ ಈ ಗುರಿ ಸಿದ್ಧಿಸಿತು.''

ಸೃಷ್ಟಿಯ ಸಕಲ ವಿದ್ಯಮಾನಗಳೂ ರಾಮನ್ ಅವರ ಆಸಕ್ತಿಯನ್ನು ಕೆರಳಿಸಿದ್ದುವು, ಎಂದೇ ಇವರ ಮಂದಿರದ ವಸ್ತುಸಂಗ್ರಹಾಲಯ ಮತ್ತು ಪುಸ್ತಕ ಭಂಡಾರಗಳು ವಿಶಾಲವ್ಯಾಪ್ತಿಯುಳ್ಳವಾಗಿವೆ. ಮೂಲತಃ ಇವರು ಭೌತವಿಜ್ಞಾನಿ ಆಗಿದ್ದರೂ ಇವರ ಕುತೂಹಲ ಸಕಲ ಶಾಸ್ತ್ರಗಳನ್ನೂ ಒಳಗೊಂಡಿತ್ತು. ವಿಜ್ಞಾನದಿಂದ ಒದಗುವ ಲಾಭ ಗ್ರಾಮೀಣ ಜನರಿಗೂ ದೊರಕಬೇಕು ಎಂಬುದು ರಾಮನ್ ಅವರ ಅಪೇಕ್ಷೆಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಫಿಸಿಕ್ಸ್ ಫಾರ್ ದಿ ಕಂಟ್ರಿಸೈಡ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಮೂರು ಪ್ರಸಾರ ಭಾಷಣಗಳನ್ನು ರಾಮನ್ ನೀಡಿದರು. ಪ್ರಕೃತಿಯಲ್ಲಿನ ಬಣ್ಣಗಳು, ಖನಿಜಗಳ ವರ್ಣವೈಭವ, ವಜ್ರಗಳನ್ನು ಕುರಿತ ಶೋಧನೆ, ಖಗೋಳವಿಜ್ಞಾನ-ಹೀಗೆ ಹಲವಾರು ಕ್ಷೇತ್ರಗಳಲ್ಲಿ ಇವರ ಒಲವು ಇತ್ತು. ಇವರು ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರತಿಷ್ಠಿತ ಸಂಶೋಧನ ಪತ್ರಿಕೆಗಳಿಗೆ (ಜರ್ನಲ್ಸ್) ತನಿಯಾಗಿಯೂ ಇತರರೊಡಗೂಡಿಯೂ 350ಕ್ಕೂ ಹೆಚ್ಚಿನ ಸಂಶೋಧನ ಪ್ರಬಂಧಗಳನ್ನು ಬರೆದರು. ರಾಮನ್ ಅವರ ವಿದ್ಯಾಭ್ಯಾಸ, ಸಂಶೋಧನೆ, ಸಿದ್ಧಿ ಎಲ್ಲವೂ ನಡೆದದ್ದು ಭಾರತದ ಒಳಗೇ. ಅಂತಾರಾಷ್ಟ್ರೀಯ ಖ್ಯಾತಿ ಬಂದ ಬಳಿಕ ಮಾತ್ರವೇ ಇವರು ವಿದೇಶ ಪ್ರವಾಸ ಕೈಗೊಂಡರು.
ರಾಮನ್ ನಿವೃತ್ತಿಗೊಂಡ ಬಳಿಕ ಇವರ ಸಂಶೋಧನಾ ಕೆಲಸಗಳಿಗಾಗಿ ಸರ್ಕಾರ ಧನಸಹಾಯ ನೀಡುವುದಕ್ಕೆ ಮುಂದಾಯಿತು. ಆದರೆ ಇವರು ತಮ್ಮ ವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಅಡ್ಡಿಯಾಗುವುದೆಂದು ಭಾವಿಸಿ ಆ ಸಹಾಯಧನವನ್ನು ತಿರಸ್ಕರಿಸಿದರು. ಮುಂದೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೂ ಇವರ ಹೆಸರನ್ನು ಸೂಚಿಸಲಾಗಿದ್ದು ಅದಕ್ಕೂ ಇವರು ತಮ್ಮ ವಿರೋಧ ವ್ಯಕ್ತಪಡಿಸಿದರು.

ರಾಮನ್ 1970 ನವೆಂಬರ್ 21ರಂದು ಬೆಂಗಳೂರಿನಲ್ಲಿ ನಿಧನರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ